ಮಾಪಕ

ಮಾಪಕಗಳ ವೃತ್ತಾಂತ

ವಿದ್ಯುಚ್ಛಕ್ತಿ ಅಥವಾ ಎನರ್ಜಿ ಮೀಟರ್, ಇದು ಗ್ರಾಹಕರು ಉಪಯೋಗಿಸುವ ವಿದ್ಯುಚ್ಛಕ್ತಿಯ ಪ್ರಮಾಣವನ್ನು ಅಳತೆ ಮಾಡುವ ಸಾಧನವಾಗಿದೆ. ಈ ವಿದ್ಯುಚ್ಛಕ್ತಿ ಮಾಪಕಗಳನ್ನು ವಿದ್ಯುತ್ ಬಳಕೆಯ ಪ್ರಮಾಣವನ್ನು ಯೂನಿಟ್ಟುಗಳಲ್ಲಿ ದಾಖಲಿಸುವಂತೆ ತಯಾರಿಸಿ ಸಿದ್ಧಪಡಿಸಲಾಗಿದ್ದು, ಈ ಯೂನಿಟ್ಟುಗಳನ್ನು ಸರ್ವ ಸಾಮಾನ್ಯವಾಗಿ ಕಿಲೋವಾಟ್ ಅವರ್ ಅಳತೆಯಲ್ಲಿ ಗೊತ್ತುಪಡಿಸಲಾಗುತ್ತದೆ.
೧ ಗಂಟೆ ಅವಧಿಗೆ ೧೦೦೦ ವಾಟ್ ವಿದ್ಯುಚ್ಛಕ್ತಿಯನ್ನು ಗೊತ್ತುಪಡಿಸಲು ೧ಕಿಲೋವಾಟ್ ಅವರ್ ಅಥವಾ ೧ ಯೂನಿಟ್ ವಿದ್ಯುಚ್ಛಕ್ತಿಯು ಅವಶ್ಯಕತೆ ಇದೆ.(ಉದಾ: ೧೦೦ವಾಟ್‌ನ ೧೦ ಇನ್‌ಕ್ಯಾಂಡೆಸೆಂಟ್ ಬಲ್ಬ್‌ಗಳು ೧ ಗಂಟೆ ಅವಧಿಗೆ ಉಪಯೋಗಿಸಿದ ವಿದ್ಯುತ್)
ಈ ವಿದ್ಯುತ್ ಮಾಪಕಗಳನ್ನು ಗ್ರಾಹಕರ ಆವರಣದಲ್ಲಿ, ಆ ಗ್ರಾಹಕರು ಬಳಸಿದ ವಿದ್ಯುತ್ ಪ್ರಮಾಣವನ್ನು ದಾಖಲಿಸಲು ಅಳವಡಿಸಲಾಗುತ್ತದೆ. ಹೀಗೆ ದಾಖಲಿಸಿದ ವಿದ್ಯುತ್ ಪ್ರಮಾಣಕ್ಕೆ ಅನ್ವಯಿತ ವಿದ್ಯುತ್ ಪ್ರವರ್ಗದ ದರಗಳ ಪ್ರಕಾರ ಬಿಲ್ ತಯಾರಿಸಲಾಗುತ್ತದೆ.
 
ಎಲೆಕ್ಟ್ರೋ ಮೆಕ್ಯಾನಿಕಲ್ ಮಾಪಕಗಳು:

ಇವು ಮೊಟ್ಟಮೊದಲಾಗಿ ವಿಕಾಸಗೊಳಿಸಿದ ನಮೂನೆಯ ಮಾಪಕಗಳಾಗಿದ್ದು, ಇವು ಸಂಸ್ಥೆಗಳಿಂದ ಅವಲಂಬಿತವಾಗಿದ್ದ ಮಾಪಕಗಳಾಗಿವೆ. ಸರ್ವ ಸಾಮಾನ್ಯ ಮಾದರಿ ವಿದ್ಯುತ್ ಮಾಪಕವೆಂದರೆ, ಎಲೆಕ್ಟ್ರೋ ಮೆಕ್ಯಾನಿಕಲ್ ಇಂಡಕ್ಷನ್ ವಾಟ್-ಅವರ್ ಮಾಪಕ. ಈ ಎಲೆಕ್ಟ್ರೋ ಮೆಕ್ಯಾನಿಕಲ್ ಇಂಡಕ್ಷನ್ ಮಾಪಕವು, ಇದರಲ್ಲಿ ಅಳವಡಿಸಿರುವ ಅಲ್ಯುಮಿನಿಯಂ ಡಿಸ್ಕ್ ವಿದ್ಯುತ್ ಬಳಕೆಗೆ ಅನುಗುಣವಾದ ನಿರ್ಧರಿತ ವೇಗದಲ್ಲಿ ಎಷ್ಟು ಸುತ್ತು ತಿರುಗುತ್ತದೆ ಎಂದು ಲೆಕ್ಕಾಚಾರ ಮಾಡುವ ಮೂಲಕ ಕಾರ್ಯನಿರ್ವಹಣೆಗೊಳ್ಳುತ್ತದೆ. ಈ ಅಲ್ಯುಮಿನಿಯಂ ಡಿಸ್ಕ್ ತಿರುಗಿರುವ ಸುತ್ತುಗಳೇ ವಿದ್ಯುತ್ ಬಳಕೆಯ ಅಳತೆಯನ್ನು ಸೂಚಿಸುತ್ತವೆ.

ಈ ಮಾಪಕದಲ್ಲಿ ಚಲನಗೊಳ್ಳುವ ಯಾಂತ್ರಿಕ ಭಾಗಗಳು ಹಾಗೂ ಬಹುಕಾಲದಿಂದ ಈ ಮಾಪಕದಲ್ಲಿ ಶೇಖರಣೆಗೊಳ್ಳುತ್ತಿದ್ದ ಧೂಳು ಹಾಗೂ ತೇವಾಂಶಗಳು ಈ ಮಾಪಕಗಳ ಕಾರ್ಯನಿಖರತೆಗೆ ಪ್ರಶ್ನಾತೀತ ಹಾಗೂ ಪ್ರಮುಖ ಅಂಶವಾಗಿವೆ. ಈ ಕಾರಣದಿಂದ ಕೇಂದ್ರೀಯ ವಿದ್ಯುಚ್ಛಕ್ತಿ ಪ್ರಾಧಿಕಾರವು ಸದರಿ ಎಲೆಕ್ಟ್ರೋ ಮೆಕ್ಯಾನಿಕಲ್ ಇಂಡಕ್ಷನ್ ಮಾಪಕಗಳನ್ನು ಕಳಚಿ ಉತ್ತಮ ನಿಖರತೆಯ ಮಾಪಕಗಳನ್ನು ಅಳವಡಿಸುವಂತೆ ಮಾರ್ಗದರ್ಶನ ನೀಡಿದೆ.

ಎಲೆಕ್ಟ್ರಾನಿಕ್ ಮಾಪಕಗಳು:

ಎಲೆಕ್ಟ್ರಾನಿಕ್ ಮಾಪಕಗಳು ಎರಡನೆಯ ನಮೂನೆಯ ವಿಕಾಸಗೊಳಿಸಿದ ಸಾಧನಗಳಾಗಿವೆ.

ಎಲೆಕ್ಟ್ರಾನಿಕ್ ವಾಟ್-ಅವರ್ ಮಾಪಕಗಳು ಘನರೂಪದ ಸರ್ಕ್ಯೂಟುಗಳ ಮೂಲಕ ವಿದ್ಯುತ್ ಸಂಕೇತಗಳನ್ನು ಸೃಷ್ಟಿಸಿ, ಇದರ ತರಂಗ ಅಥವಾ ಸಾಮರ್ಥ್ಯವು ಬಳಕೆಯಾಗುತ್ತಿರುವ ವೋಲ್ಟ್ ಹಾಗೂ ವಿದ್ಯುತ್ತಿಗೆ ಅನುಪಾತವಾಗಿದೆ. ಈ ಸಂಕೇತಗಳೇ ವಿದ್ಯುತ್ ಬಳಕೆಯ ಅಳತೆಯಾಗಿ ಪರಿವರ್ತನೆಗೊಂಡು, ಮೆಕ್ಯಾನಿಕಲ್ ಅಥವಾ ಎಲೆಕ್ಟ್ರಾನಿಕ್ ಇಂಡಿಕೇಟರುಗಳಿಂದ ದಾಖಲಿತಗೊಳ್ಳುತ್ತವೆ. ಈ ಮಾಪಕಗಳು ಎಲೆಕ್ಟ್ರೋ ಮೆಕ್ಯಾನಿಕಲ್ ಮಾಪಕಗಳಿಗಿಂತ ದುಬಾರಿ ದರದ್ದಾಗಿದ್ದರೂ, ಹೆಚ್ಚು ನಿಖರತೆಯುಳ್ಳದ್ದಾಗಿವೆ.

ಎಲೆಕ್ಟ್ರಾನಿಕ್ ಮಾಪಕಗಳು ಲಿಕ್ವಿಡ್ ಕ್ರಿಸ್ಟಲ್ ಡಿಸ್ಪ್ಲೆ ಅಥವಾ ಲೈಟ್ ಎಮಿಟಿಂಗ್ ಡಯೋಡ್ ಡಿಸ್ಪ್ಲೆ ಮೂಲಕ ವಿದ್ಯುತ್ ಬಳಕೆಯನ್ನು ತೋರಿಸುತ್ತವೆ. ದೂರದ ಸ್ಥಳಕ್ಕೂ ಸಹ ದಾಖಲಿತ ರೀಡಿಂಗನ್ನು ರವಾನಿಸುತ್ತದೆ. ವಿದ್ಯುತ್ ಬಳಕೆಯನ್ನು ಅಳೆಯುವುದರ ಜೊತೆಗೆ, ಈ ಎಲೆಕ್ಟ್ರಾನಿಕ್ ಮಾಪಕಗಳು ವಿದ್ಯುತ್ ಹೊರೆ ಮತ್ತು ಸರಬರಾಜು, ಗರಿಷ್ಟ ಬೇಡಿಕೆ ಪ್ರಮಾಣ, ವಿದ್ಯುತ್ ಕಾರಕಾಂಶ, ಬಳಸಿದ ರಿಯಾಕ್ಟೀವ್ ಪವರ್ ಇವುಗಳನ್ನು ದಾಖಲಿಸುವ ಸಾಮರ್ಥ್ಯವನ್ನು ಹೊಂದಿವೆ. ಇವು ಸಮಯಾಧಾರಿತ ವಿದ್ಯುತ್ ಬಳಕೆಯ ಬಿಲ್ಲಿಂಗ್‌ಗೂ ಸಹ ಅನುಕೂಲವಾಗಿವೆ. ಉದಾ: ಅಥ್ಯಧಿಕ ಬೇಡಿಕೆ ಅವಧಿ ಹಾಗೂ ಅತ್ಯಧಿಕ ಬೇಡಿಕೆ ಇಲ್ಲದ ಅವಧಿಯಲ್ಲಿನ ವಿದ್ಯುತ್ ಬಳಕೆಯನ್ನು ದಾಖಲಿಸುವುದು.

ಬೆವಿಕಂಪೆನಿಯ ವ್ಯಾಪ್ತಿಯಲ್ಲಿ ಇರುವ ಎಲ್ಲಾ ಎಲೆಕ್ಟ್ರೋಮೆಕ್ಯಾನಿಕಲ್ ಮಾಪಕಗಳನ್ನು ಎಲೆಕ್ಟ್ರೋಸ್ಟಾಟಿಕ್ ಮಾಪಕಗಳಿಂದ ಬದಲಾಯಿಸುವ ಉಪಕ್ರಮವನ್ನು ಕೈಗೊಳ್ಳಲಾಗಿದೆ.

ಸಮಯಾಧಾರಿತ ಮಾಪಕ ಅಳವಡಿಕೆ:

ಸಮಯಾಧಾರಿತ ವಿದ್ಯುತ್ ಬಳಕೆಯ ಮಾಪಕ, ಇದನ್ನು ಬಳಸಿದ ಸಮಯ ಅಥವಾ ಋತುಕಾಲಿಕ ಸಮಯ ಬಳಕೆ ಎಂದೂ ಕರೆಯಲಾಗುತ್ತದೆ. ಈ ಅಳತೆಯ ಸಾಧನವನ್ನು ದಿನ, ತಿಂಗಳು ಹಾಗೂ ವರ್ಷವನ್ನು ಆಧರಿಸಿ, ಅದರ ಅವಧಿಯನ್ನು ವಿಂಗಡಿಸಿ, ವಿದ್ಯುತ್ ಕೋರಿಕೆಯ ಅವಧಿಯನ್ನು ಅವಲಂಬಿಸಿ, ಅನ್ವಯಿತ ವಿದ್ಯುತ್ ದರ ಪ್ರವರ್ಗದ ಪ್ರಕಾರ ಅತ್ಯಧಿಕ ಬೇಡಿಕೆಗೆ ಒಂದು ದರ, ಉಳಿದ ಅವಧಿಗೆ ಮತ್ತೊಂದು ದರ ಎಂದು ಗೊತ್ತುಪಡಿಸಲಾಗುತ್ತದೆ. ಗ್ರಾಹಕರು ಬಳಸುವ ವಿದ್ಯುಚ್ಛಕ್ತಿಯನ್ನು ಸ್ವಚಲಿತವಾಗಿ ನಿಯಂತ್ರಿಸಲು, ಅಂದರೆ ಯಾಂತ್ರಿಕವಾಗಿ ತನ್ನಷ್ಟಕ್ಕೆ ತಾನೇ ವಿದ್ಯುತ್ ಹೊರೆಯನ್ನು ನಿಯಂತ್ರಿಸುವ ರೀತಿಯಲ್ಲಿ ಇದನ್ನು ಉಪಯೋಗಿಸಬಹುದಾಗಿದ್ದು, ಕೆಲವೊಮ್ಮೆ ಗ್ರಾಹಕರೇ ತಮ್ಮ ವಿದ್ಯುತ್ ಬಳಕೆಯನ್ನು ಸ್ವಯಂ ನಿಯಂತ್ರಿಸಿಕೊಳ್ಳಲು ಅಥವಾ ತದನುಸಾರ ವಿದ್ಯುತ್ ಬಳಕೆಗೆ ಪಾವತಿಸಲು ಜವಾಬ್ದಾರಿಯುತರಾಗಿರುತ್ತಾರೆ. ಇದರಿಂದ ವಿದ್ಯುತ್ ಸರಬರಾಜು ಸಂಸ್ಥೆಗಳು ತಮ್ಮ ಪ್ರಸರಣ ಸೌಕರ್ಯಗಳನ್ನು ಯೋಜನಾಬದ್ಧವಾಗಿ ರೂಪಿಸಿಕೊಳ್ಳಲು ಅವಕಾಶವಾಗುತ್ತದೆ.
ಹೀಗಾಗಿ ಸಮಯಾಧಾರಿತ ವಿದ್ಯುತ್ ಬಳಕೆ ಸಾಧನವು ಬೇಡಿಕೆಗೆ ತಕ್ಕಂತೆ ನಿರ್ವಹಣೆ ಪರವಾಗಿದೆ.
ಅಲ್ಲದೆ, ದಿನಾಂಕ ೩೦.೦೪.೨೦೧೨ರ ಕವಿನಿ ಆಯೋಗದ ನಿರ್ದೇಶನದ ಪ್ರಕಾರ, ೫೦೦ಕೆವಿಎಗಿಂತ ಅಧಿಕ ವಿದ್ಯುತ್ ಹೊರೆಯನ್ನು ಹೊಂದಿರುವ ಎಚ್.ಟಿ೨(ಎ) ಮತ್ತು ಎಚ್.ಟಿ.೨(ಬಿ)ಪ್ರವರ್ಗದ ಎಲ್ಲಾ ಎಚ್.ಟಿ.ಸ್ಥಾಪನಗಳು ದಿನಾಂಕ ೦೧.೦೬.೨೦೧೨ರಿಂದ ಕಡ್ಡಾಯವಾಗಿ ಈ ಸಮಯಾಧಾರಿತ ವಿದ್ಯುತ್ ಬಳಕೆ ಮಾಪಕವನ್ನು ಅಳವಡಿಸಿಕೊಳ್ಳಬೇಕಾಗಿದೆ.