ಬಿಲ್ ತಯಾರಿಕೆ ಮತ್ತು ಲೆಕ್ಕ ನಿರ್ವಹಣೆ | BESCOM

BESCOM : Bangalore Electricity Supply Company Limited

ಎಸ್ಎಂಎಸ್ : 58888
ಸಹಾಯವಾಣಿ : 1912
9449844640

ಬಿಲ್ ತಯಾರಿಕೆ ಮತ್ತು ಲೆಕ್ಕ ನಿರ್ವಹಣೆ

ಬಿಲ್ ತಯಾರಿಕೆ ಮತ್ತು ವಿದ್ಯುತ್ ಖರೀದಿಯ ಲೆಕ್ಕ ನಿರ್ವಹಣೆ:

ವಿದ್ಯುಚ್ಛಕ್ತಿ ಕಾಯಿದೆ 2003ರ ನಿಯಮಗಳ ಪ್ರಕಾರ ಕವಿಪ್ರನಿನಿಯನ್ನು ವಿದ್ಯುತ್ ವ್ಯವಹರಣೆ ಚಟುವಟಿಕೆಗಳಿಂದ ನಿರ್ಬಂಧಗೊಳಿಸಿ, ಶಾಸನಬದ್ಧ ವರ್ಗಾವಣೆ ಯೋಜನೆಯನ್ವಯ ದಿನಾಂಕ 10.6.2005 ರಿಂದ ಕವಿಪ್ರನಿನಿಯ ಉತ್ತರದಾಯಿತ್ವ ಸಂಸ್ಥೆಗಳಾದ ಐದು ವಿದ್ಯುತ್ ಸರಬರಾಜು ಕಂಪೆನಿಗಳಿಗೆ ವಿದ್ಯುತ್ ವ್ಯವಹರಣೆಯ ಚಟುವಟಿಕೆಯನ್ನು ವಹಿಸಲಾಯಿತು. ದೀರ್ಘಾವಧಿ ವಿದ್ಯುತ್ ಖರೀದಿ ಒಪ್ಪಂದಗಳನ್ನು ಕರ್ನಾಟಕ ಸರ್ಕಾರದ ಆದೇಶದ ಪ್ರಕಾರ ನಿರ್ವಹಿಸಲಾಗಿದ್ದು, ಕಾಲಕಾಲಕ್ಕೆ ಇದರ ಅಧಿಸೂಚನೆಗಳನ್ನು ಪ್ರಕಟಿಸಲಾಗುತ್ತಿದೆ. ಆಯಾ ವಿದ್ಯುತ್ ಸರಬರಾಜು ಕಂಪೆನಿಯ ಭೌಗೋಳಿಕ ಪ್ರದೇಶದ ಅನುಸಾರ ಅಸಂಪ್ರದಾಯಿಕ ವಿದ್ಯುತ್ ಯೋಜನೆಗಳನ್ನು ವಹಿಸಲಾಗುತ್ತಿದೆ.

ಬೆವಿಕಂಪೆನಿಯು ದಿನಾಂಕ 10.6.2005ರಿಂದ ವಿದ್ಯುತ್ ಉತ್ಪಾದಕರಿಂದ ನೇರವಾಗಿ ವಿದ್ಯುತ್ ಖರೀದಿಸುತ್ತಿದೆ. ವಿದ್ಯುತ್ ಖರೀದಿಯ ಬಿಲ್ಲುಗಳ ಪಾವತಿಯನ್ನು ಕಾರ್ಯಪ್ರಕ್ರಿಯೆಗೆ ಒಳಪಡಿಸಿ, ಲೆಕ್ಕೀಕರಿಸಲಾಗುತ್ತಿದೆ. ದಿನಾಂಕ 23.4.2012ರಂದು ಕರ್ನಾಟಕ ಸರ್ಕಾರದ ಆದೇಶದ ಪ್ರಕಾರ ಒದಗಿಸಿರುವ ಹಂಚಿಕೆಯ ಪಾಲಿನ ವಿವರ ಹೀಗಿದೆ:

ಕೆಪಿಸಿಎಲ್ ಜಲ ವಿದ್ಯುತ್
(ಎ) ಶರಾವತಿ
(ಬಿ) ಇತರೆ
31.91 %

41.58 %

ಶಾಖೋತ್ಪನ್ನ 50.44%
ಡೀಸೆಲ್ ವಿದ್ಯುತ್ ಉತ್ಪಾದನಾ ಘಟಕ 100%
ಕೇಂದ್ರೀಯ ವಿದ್ಯುತ್ ಉತ್ಪಾದನಾ ಸ್ಥಾವರಗಳು 50.44%
ಬೃಹತ್ ಸ್ವಾಯತ್ತ ವಿದ್ಯುತ್ ಉತ್ಪಾದನಾ ಸಂಸ್ಥೆಗಳು 60.95%
ಅಲ್ಪಾವಧಿ ಹಾಗೂ ಮಧ್ಯಂತರ ಅವಧಿಯ ಒಪ್ಪಂದಗಳು 49.64%
ಬೆವಿಕಂಪೆನಿ ವ್ಯಾಪ್ತಿಯಲ್ಲಿನ ಎನ್.ಸಿ.ಇ.ಯೋಜನೆಗಳು 100%
ಪರಿಚ್ಛೇಧ ೧೧ ರ ಬಿಲ್ 49.62%
ಕವಿಪ್ರನಿನಿ ಪ್ರಸರಣ ಶುಲ್ಕ 49.62%

ಬಿಲ್ ತಯಾರಿಕೆ ಕಾರ್ಯವಿಧಾನ:

ಪ್ರತಿ ತಿಂಗಳು 1ರಿಂದ 15ನೇ ದಿನಾಂಕದವರೆಗೆ ವಿದ್ಯುತ್ ಉತ್ಪಾದಕರು/ವ್ಯವಹರಣೆದಾರರಿಂದ ಬಿಲ್ಲುಗಳನ್ನು ಸ್ವೀಕರಿಸಲಾಗುತ್ತದೆ. ಸ್ವೀಕರಿಸಿದ ಬಿಲ್ಲಿನ ಮೇಲೆ ಸ್ವೀಕೃತಿ ನೋಂದಣಿ ಸಂಖ್ಯೆ ಹಾಗೂ ದಿನಾಂಕವನ್ನು ದಾಖಲಿಸಿ, ಬಿಲ್ಲನ್ನು ಸಲ್ಲಿಸಿದ ದಿನಾಂಕವೆಂದು ಗೊತ್ತುಪಡಿಸಲಾಗುತ್ತದೆ. ನಂತರ ಬಿಲ್ಲುಗಳನ್ನು ಪಾವತಿಯ ಅನುಮೋದನೆಗಾಗಿ ಸಂಬಂಧಿತರಿಗೆ ರವಾನಿಸಲಾಗುತ್ತದೆ. ಪ್ರತಿಯೊಂದು ಬಿಲ್ಲಿನ ಮೇಲೂ ನೋಂದಣಿ ಸಂಖ್ಯೆ ಹಾಗೂ ದಿನಾಂಕವನ್ನು ದಾಖಲಿಸಿ, ಆ ಬಿಲ್ಲನ್ನು ವಿದ್ಯುತ್ ಖರೀದಿ ಒಪ್ಪಂದದಲ್ಲಿನ ಷರತ್ತು ಹಾಗೂ ನಿಬಂಧನೆಗಳ ಪ್ರಕಾರ ವಿದ್ಯುತ್ ದರ, ಮಾಪಕ ವಾಚನಗಳನ್ನು ಪರಿಶೀಲಿಸಿ, ಪಾವತಿಗಾಗಿ ಅನುಮೋದಿಸಲಾಗುತ್ತದೆ. ಇದು ವೆಚ್ಚವಾಗಿರುವುದರಿಂದ, ಲೆಕ್ಕ ಶೀರ್ಷಿಕೆ 70ಕ್ಕೆ ಡೆಬಿಟ್ ಹಾಗೂ ಲೆಕ್ಕ ಶೀರ್ಷಿಕೆ 41ಕ್ಕೆ ಕ್ರೆಡಿಟ್ ಮಾಡಿ ಲೆಕ್ಕೀಕರಣಕ್ಕೆ ಒಳಪಡಿಸಲಾಗುವುದು. ವ್ಯವಸ್ಥಾಪಕರು, ಸಹಾಯಕ ಪ್ರಧಾನ ವ್ಯವಸ್ಥಾಪಕರು, ಉಪ ಪ್ರಧಾನ ವ್ಯವಸ್ಥಾಪಕರು ಈ ಬಿಲ್ಲುಗಳನ್ನು ಪರಿಶೀಲಿಸಿದ ನಂತರ ಬಿಲ್ಲುಗಳನ್ನು ಲೆಕ್ಕ ಪರಿಶೋಧನೆಗಾಗಿ ಅಂತರಿಕ ಪರಿಶೋಧನಾ ಘಟಕಕ್ಕೆ ರವಾನಿಸಲಾಗುತ್ತದೆ. ಅಂತರಿಕ ಪರಿಶೋಧನಾ ಘಟಕದಲ್ಲಿ ಬಿಲ್ಲುಗಳನ್ನು ಪರಿಶೀಲಿಸಿದ ನಂತರ, ಪರಿಶೀಲಿತ ಬಿಲ್ಲುಗಳಿಗೆ ಪ್ರಧಾನ ವ್ಯವಸ್ಥಾಪಕರು ಮೇಲು ರುಜು ಮಾಡುತ್ತಾರೆ. ನಂತರ ಬಿಲ್ಲುಗಳನ್ನು, ಗಡುವು ದಿನಾಂಕದೊಳಗೆ ಪಾವತಿಗಾಗಿ ನಗದು ಶಾಖೆಗೆ ಕೆಳಕಂಡಂತೆ ರವಾನಿಸಲಾಗುತ್ತದೆ:

ಕೇಂದ್ರೀಯ ವಿದ್ಯುತ್ ಉತ್ಪಾದನಾ ಸ್ಥಾವರಗಳ ಬಿಲ್ಲುಗಳು: ಎನ್.ಟಿ.ಪಿ.ಸಿ, ಎನ್.ಎಲ್.ಸಿ, ಕೈಗಾ, ಎಂ.ಎ.ಪಿ ಹಾಗೂ ಪಿ.ಜಿ.ಸಿ.ಐ.ಎಲ್. ಈ ವರ್ಗದಲ್ಲಿ ಒಳಪಡುತ್ತವೆ ಹಾಗೂ ಪಾವತಿಯ ಗಡುವು ದಿನಾಂಕ ಅರವತ್ತು ದಿನಗಳು.

(ಎ) ಎನ್.ಟಿ.ಪಿ.ಸಿ, ಎನ್.ಎಲ್.ಸಿ ಹಾಗೂ ಪಿ.ಜಿ.ಸಿ.ಐ.ಎಲ್.ನ ವಿದ್ಯುತ್ ದರ ಸೂತ್ರಗಳನ್ನು ಕೇಂದ್ರೀಯ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗದ 2009ರ ವಿದ್ಯುತ್ ದರ ನಿಬಂಧನೆಗಳ ಪ್ರಕಾರ ನಿರ್ಧರಿಸಲಾಗುತ್ತದೆ. ಕೇಂ.ವಿ.ನಿ.ಆಯೋಗದ ನಿಯಮಾವಳಿಗಳ ಪ್ರಕಾರ, ಬಿಲ್ಲುಗಳನ್ನು ಸಲ್ಲಿಸಿದ ದಿನಾಂಕದಂದೇ ಖಾತರಿ ಪತ್ರದ ಮೂಲಕ ಪಾವತಿಯನ್ನು ಮಾಡಿದರೆ ಶೇಕಡಾ2ರಷ್ಟು ರಿಯಾಯಿತಿ ಲಭ್ಯವಾಗುತ್ತದೆ. 30 ದಿನಗಳ ಒಳಗೆ ಪಾವತಿಸಿದರೆ ಶೇಕಡಾ೧ರ ರಿಯಾಯಿತಿ ಲಭ್ಯವಾಗುತ್ತದೆ. ಅರವತ್ತು ದಿನಗಳನ್ನು ಮೀರಿದ ಪಾವತಿಗೆ ಶೇಕಡಾ 1.5ರಂತೆ ತಡ ಪಾವತಿ ಅಧಿಕ ಕರವನ್ನು ಪಾವತಿಸಬೇಕಾಗುತ್ತದೆ.

(ಬಿ) ಕೈಗಾ, ಎಂ.ಎ.ಪಿ.ಎಸ್.ನ ವಿದ್ಯುತ್ ದರ ಸೂತ್ರಗಳನ್ನು ಅಣು ವಿದ್ಯುತ್ ಇಲಾಖೆಯು ಹೊರಡಿಸಿರುವ ವಿದ್ಯುತ್ ದರ ಆದೇಶದ ಪ್ರಕಾರ ನಿರ್ಧರಿಸಲಾಗುತ್ತದೆ. ಬಿಲ್ಲುಗಳನ್ನು ಸಲ್ಲಿಸಿದ ಮೂರು ದಿನಗಳೊಳಗೆ ಪಾವತಿಯನ್ನು ಮಾಡಿದರೆ, ಶೇಕಡಾ 2.5 ರಿಯಾಯಿತಿ ಲಭ್ಯವಾಗುತ್ತದೆ. ಅರವತ್ತು ದಿನಗಳನ್ನು ಮೀರಿದ ಪಾವತಿಗೆ ಶೇಕಡಾ 1.5 ರಂತೆ ಬಡ್ಡಿಯ ರೂಪದಲ್ಲಿ ಅಧಿಕ ಕರವನ್ನು ಪಾವತಿಸಬೇಕಾಗುತ್ತದೆ.

ಕವಿನಿನಿ:

(ಎ) ಕವಿನಿನಿ ಜಲ ವಿದ್ಯುತ್ ಯೋಜನೆಯ ಬಿಲ್ಲಿನಲ್ಲಿ ಶರಾವತಿ ಕಣಿವೆ ಯೋಜನೆ, ಕಾಳಿ ಕಣಿವೆ ಯೋಜನೆ, ವರಾಹಿ ಕಣಿವೆ ಯೋಜನೆ, ಕದ್ರ, ಕೊಡಸಳ್ಳಿ, ಗೇರುಸೊಪ್ಪಾ, ಘಟಪ್ರಭಾ, ಭದ್ರಾ, ಆಲಮಟ್ಟಿ, ಎಮ್.ಜಿ.ಎಚ್.ಇ. ಜೋಗ್, ಶಿವನಸಮುದ್ರ, ಶಿಂಷಾ ಮತ್ತು ಮುನಿರಾಬಾದ್ ಯೋಜನೆಗಳು ಸೇರಿವೆ. ಕವಿನಿ ಆಯೋಗವು ಅನುಮೋದಿಸಿರುವ ವಿದ್ಯುತ್ ಖರೀದಿ ಒಪ್ಪಂದಗಳಲ್ಲಿ ತಿಳಿಸಿರುವ ವಿದ್ಯುತ್ ದರಗಳ ಪ್ರಕಾರ ನಿರ್ಧರಿಸಲಾಗುತ್ತದೆ. ಬಿಲ್ಲುಗಳನ್ನು ಸಲ್ಲಿಸಿದ ಮೂವತ್ತು ದಿನಗಳೊಳಗಾಗಿ ಪಾವತಿಯನ್ನು ಮಾಡತಕ್ಕದು, ಇಲ್ಲವಾದರೆ ವಾರ್ಷಿಕ ಶೇಕಡಾ 12ರ ದರದಲ್ಲಿ ಬಡ್ಡಿಯನ್ನು ಪಾವತಿಸಬೇಕಾಗುತ್ತದೆ.

(ಬಿ)ರಾಯಚೂರು ಶಾಖೋತ್ಪನ್ನ ಕೇಂದ್ರ 1ರಿಂದ 7ರ ಘಟಕಗಳು, 1* 250ಮೆಗಾ ವಾಟ್ ಬಿ.ಟಿ.ಪಿ.ಎಸ್. ಘಟಕ ಹಾಗೂ ಯಲಹಂಕದಲ್ಲಿರುವ ಡೀಸೆಲ್ ವಿದ್ಯುತ್ ಉತ್ಪಾದನಾ ಘಟಕಗಳು ಕವಿನಿನಿ ಶಾಖೋತ್ಪನ್ನ ವಿದ್ಯುತ್ ಕೇಂದ್ರಗಳಾಗಿವೆ. ಅನುಮೋದಿತ ವಿದ್ಯುತ್ ಖರೀದಿ ಒಪ್ಪಂದದ ಪ್ರಕಾರ ವಿದ್ಯುತ್ ದರಗಳನ್ನು ನಿರ್ಧರಿಸಲಾಗಿದ್ದು, ಬಿಲ್ಲುಗಳನ್ನು ಸಲ್ಲಿಸಿದ ಮೂವತ್ತು ದಿನಗಳೊಳಗಾಗಿ ಪಾವತಿಯನ್ನು ಮಾಡತಕ್ಕದು, ಇಲ್ಲವಾದರೆ ವಾರ್ಷಿಕ ಶೇಕಡಾ 12ರ ದರದಲ್ಲಿ ಬಡ್ಡಿಯನ್ನು ಪಾವತಿಸಬೇಕಾಗುತ್ತದೆ.

(ಸಿ) ಕವಿನಿನಿ ಸೌರಶಕ್ತಿ ಹಾಗೂ ಪವನ ವಿದ್ಯುತ್ ಘಟಕದ ಬಿಲ್ಲುಗಳ ಪಾವತಿಯನ್ನು ಅನುಮೋದಿತ ವಿದ್ಯುತ್ ಖರೀದಿ ಒಪ್ಪಂದದ ಪ್ರಕಾರ ನಿರ್ಧರಿಸಲಾಗಿದ್ದು, ಬಿಲ್ಲುಗಳನ್ನು ಸಲ್ಲಿಸಿದ ಮೂವತ್ತು ದಿನಗಳೊಳಗಾಗಿ ಪಾವತಿಯನ್ನು ಮಾಡತಕ್ಕದು,

ಬೃಹತ್ ಸ್ವಾಯತ್ತ ವಿದ್ಯುತ್ ಉತ್ಪಾದನಾ ಸಂಸ್ಥೆಗಳು: ಟಾಟಾ ಪವರ್ ಕಂಪೆನಿ, ರಾಯಲ್‌ಸೀಮಾ ಹಾಗೂ ಉಡುಪಿ ಪವರ್ ಕಾರ್ಪೊರೇಷನ್, ಇವು ಮೂರು ಬೃಹತ್ ಸ್ವಾಯತ್ತ ವಿದ್ಯುತ್ ಉತ್ಪಾದನಾ ಸಂಸ್ಥೆಗಳಾಗಿದ್ದು, ವಿದ್ಯುತ್ ಖರೀದಿ ಒಪ್ಪಂದದ ಪ್ರಕಾರ ಬಿಲ್ಲುಗಳನ್ನು ಪಾವತಿಸಲಾಗುತ್ತದೆ. ಉಡುಪಿ ಪವರ್ ಕಾರ್ಪೊರೇಷನ್‌ನ ವಿದ್ಯುತ್ ದರವನ್ನು ಕೇಂದ್ರೀಯ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗವು ಅನುಮೋದಿಸಬೇಕಾಗಿದೆ.

ಟಾಟಾ ಪವರ್ ಕಂಪೆನಿ ಮತ್ತು ರಾಯಲ್‌ಸೀಮಾ ಕಂಪೆನಿಗಳ ಬಿಲ್ಲುಗಳ ಪಾವತಿಯನ್ನು 25 ದಿನಗಳೊಳಗೆ ಮಾಡಿದರೆ, ಹಾಗೆ ಮುಂಚಿತವಾಗಿ ಪಾವತಿಸಿದ ಪ್ರತಿ ದಿನಕ್ಕೆ ಶೇಕಡಾ 0.1 ರಿಯಾಯಿತಿ ಲಭ್ಯವಾಗುತ್ತದೆ. ತಡಪಾವತಿಯಾದಲ್ಲಿ, ಎಸ್.ಬಿ.ಐ.ಪಿ.ಎಲ್.ಆರ್ + ಶೇಕಡಾ 2ರಂತೆ ಬಡ್ಡಿಯನ್ನು ಪಾವತಿಸಬೇಕಾಗುತ್ತದೆ.

ಎನ್.ಸಿ. ಇ., ಯೋಜನೆಗಳು : ಸುಮಾರು 308 ಎನ್.ಸಿ.ಇ.ಯೋಜನೆಗಳಿದ್ದು, ಇದರ ಪೈಕಿ 1 ಸಹ ವಿದ್ಯುತ್ ಉತ್ಪಾದನೆ, 3 ಜೈವಿಕ ವಿದ್ಯುತ್ ಉತ್ಪಾದನೆ, 12 ಸಣ್ಣ ಜಲ ವಿದ್ಯುತ್ ಯೋಜನೆಗಳು, 1 ಸೌರ ಶಕ್ತಿ ವಿದ್ಯುತ್ ಉತ್ಪಾದನೆ ಹಾಗೂ 291 ಪವನ ವಿದ್ಯುತ್ ಉತ್ಪಾದನೆ ಘಟಕಗಳಿವೆ. ವಿದ್ಯುತ್ ಖರೀದಿ ಒಪ್ಪಂದಗಳ ಪ್ರಕಾರ ಬಿಲ್ಲುಗಳ ಪಾವತಿ ಮಾಡಲಾಗುತ್ತದೆ. ಬಿಲ್ಲುಗಳನ್ನು ಸಲ್ಲಿಸಿದ ಹದಿನೈದು ದಿನಗಳೊಳಗಾಗಿ ಪಾವತಿಯನ್ನು ಮಾಡತಕ್ಕದು, ಇಲ್ಲವಾದರೆ ಎಸ್.ಬಿ.ಐ.ಪಿ.ಎಲ್.ಆರ್ + ಶೇಕಡಾ 2ರಂತೆ ಬಡ್ಡಿಯನ್ನು ಪಾವತಿಸಬೇಕಾಗುತ್ತದೆ.

ಮಧ್ಯಂತರ ಅವಧಿ ಒಪ್ಪಂದಗಳು: ಜೆ.ಎಸ್.ಡಬ್ಲ್ಯು., ಬಿ.ಎಮ್.ಎಮ್ ಇಸ್ಪ್ಯಾಟ್, ಎನ್‌ಇಟಿಎಸ್ ಸಂಸ್ಥೆಗಳು ವಿದ್ಯುತ್ ಖರೀದಿ ಒಪ್ಪಂದದಲ್ಲಿ ಸೂಚಿಸಿರುವ ದರಗಳಲ್ಲಿ ಮಧ್ಯಂತರ ಅವಧಿ ಷರತ್ತುಗಳ ಒಪ್ಪಂದದ ಪ್ರಕಾರ ವಿದ್ಯುತ್ ಸರಬರಾಜು ಮಾಡುತ್ತಿವೆ. ಬಿಲ್ಲುಗಳನ್ನು ಸಲ್ಲಿಸಿದ ದಿನಾಂಕದಂದು ಪಾವತಿಸಿದರೆ ಶೇಕಡಾ 2.25ರ ರಿಯಾಯಿತಿ, ನಂತರದ ದಿನಾಂಕದಿಂದ 5ನೇ ದಿನದವರೆಗೆ ಪಾವತಿಸಿದರೆ ಶೇಕಡಾ 0.05 ರಿಯಾಯಿತಿ, 6ನೇ ದಿನದಿಂದ 30ನೇ ದಿನದವರೆಗೆ ಪಾವತಿಸಿದರೆ ಶೇಕಡಾ 0.033 ರಿಯಾಯಿತಿ ಲಭ್ಯವಾಗುತ್ತದೆ. ಗಡುವು ದಿನಾಂಕವನ್ನು ಮೀರಿದ ಪಾವತಿಗೆ ವಾರ್ಷಿಕ ಶೇಕಡಾ 15ರ ದರದಲ್ಲಿ ಬಡ್ಡಿಯನ್ನು ಪಾವತಿಸಬೇಕಾಗುತ್ತದೆ.

ಅಲ್ಪಾವಧಿ ಒಪ್ಪಂದಗಳು: ಜೆ.ಎಸ್.ಡಬ್ಲ್ಯು, ಹರೇ ಕೃಷ್ಣ, ಎನ್.ಎಲ್.ಎಸ್.ತುಂಗಭದ್ರಾ, ಎನ್.ಇ.ಟಿ.ಎಸ್, ಟಾಟಾ ಪವರ್ ಕಂಪೆನಿ, ಪಿ.ಟಿ.ಸಿ. ಈ ಸಂಸ್ಥೆಗಳು ಅತ್ಯಧಿಕ ಬೇಡಿಕೆ ಇರುವ ಅವಧಿಯಲ್ಲಿ ಅಲ್ಪಾವಧಿ ಒಪ್ಪಂಡದ ಪ್ರಕಾರ ವಿದ್ಯುತ್ ಸರಬರಾಜು ಮಾಡಿವೆ. ಬಿಲ್ಲುಗಳನ್ನು ಸಲ್ಲಿಸಿದ ದಿನಾಂಕದಿಂದ 7 ದಿನಗಳೊಳಗೆ ಪಾವತಿಸಿದರೆ ಶೇಕಡಾ2 ರಿಯಾಯಿತಿ, ತದನಂತರದ ದಿನಾಂಕದಿಂದ 30 ದಿನಗಳೊಳಗೆ ಪಾವತಿಸಿದರೆ ಶೇಕಡಾ 1ರ ರಿಯಾಯಿತಿ ಲಭ್ಯವಾಗುತ್ತದೆ. ಗಡುವು ದಿನಾಂಕವನ್ನು ಮೀರಿದ ಪಾವತಿಗೆ ವಾರ್ಷಿಕ ಶೇಕಡಾ 15ರ ದರದಲ್ಲಿ ಬಡ್ಡಿಯನ್ನು ಪಾವತಿಸಬೇಕಾಗುತ್ತದೆ.

ಪರಿಚ್ಛೇಧ 11 ರ ಬಿಲ್ಲುಗಳು: ಕರ್ನಾಟಕ ಸರ್ಕಾರವು ಫೆಬ್ರವರಿ 2012ರಿಂದ ಮೇ 2012ರವರೆಗೆ ವಿದ್ಯುಚ್ಛಕ್ತಿ ಕಾಯಿದೆ 2003ರ ಪರಿಚ್ಛೇಧ 11ನ್ನು ಅನ್ವಯಿಸಿ ಕವಿನಿ ಆಯೋಗದ ಅನುಮೋದನೆಗೆ ಒಳಪಟ್ಟಂತೆ ಪ್ರತಿ ಕಿಲೋವಾಟ್ ಅವರ್ಸ್‌ಗೆ ರೂ.5.30ರ ತಾತ್ಕಾಲಿಕ ದರವನ್ನು ನಿಗದಿಪಡಿಸಿದೆ. ಬೆವಿಕಂಪೆನಿಯು ಈ ದರದ ವಿರುದ್ಧ ಕವಿನಿ ಆಯೋಗಕ್ಕೆ ಮನವಿಯನ್ನು ಸಲ್ಲಿಸಿದ್ದು, ಅಂತಿಮ ಆದೇಶವನ್ನು ನಿರೀಕ್ಷಿಸಲಾಗಿದೆ. 7 ದಿನಗಳ ಒಳಗೆ ಪಾವತಿಸಿದರೆ ಶೇಕಡಾ 2 ರ ರಿಯಾಇತಿ ಹಾಗೂ 30 ದಿನಗಳ ಒಳಗೆ ಪಾವತಿಸಿದರೆ ಶೇಕಡಾ 1ರ ರಿಯಾಯಿತಿ ಲಭ್ಯವಾಗುತ್ತದೆ. ಗಡುವು ದಿನಾಂಕವನ್ನು ಮೀರಿದ ಪಾವತಿಗೆ ವಾರ್ಷಿಕ ಶೇಕಡಾ 15ರ ದರದಲ್ಲಿ ಬಡ್ಡಿಯನ್ನು ಪಾವತಿಸಬೇಕಾಗುತ್ತದೆ. ಪರಿಚ್ಛೇಧ 11ರ ಖರೀದಿಗಳು ವಿದ್ಯುತ್ ಖರೀದಿ ಒಪ್ಪಂದವನ್ನು ಮಾಡಿಕೊಳ್ಳದ ಸಂಸ್ಥೆಗಳಿಗೆ ಮಾತ್ರ ಅನ್ವಯಿಸುತ್ತದೆ. ವಿದ್ಯುತ್ ಖರೀದಿ ಒಪ್ಪಂದವನ್ನು ಮಾಡಿಕೊಂಡಿರದ 33 ಸಂಸ್ಥೆಗಳು ಬೆವಿಕಂಪೆನಿಗೆ ವಿದ್ಯುತ್ ಸರಬರಾಜು ಮಾಡಿವೆ.
ಎಸ್ಕ್ರೋ ಲೆಕ್ಕದ ಮೂಲಕ ಕವಿಪ್ರನಿನಿಯು ತನ್ನ ಪ್ರಸರಣಾ ಶುಲ್ಕವನ್ನು ಪಡೆದುಕೊಳ್ಳುತ್ತದೆ.

ಲೆಕ್ಕೀಕರಣ:

ಬಿಲ್ಲುಗಳನ್ನು ಅನುಮತಿಸುವಾಗ ವೆಚ್ಚವೆಂದು ಲೆಕ್ಕೀಕರಿಸಿ, ನಗದು ಶಾಖೆಯಿಂದ ಪಾವತಿ ವಿವರಗಳನ್ನು ಸ್ವೀಕರಿಸಿದ ನಂತರ ಪಾವತಿ ಎಂದು ಲೆಕ್ಕೀಕರಿಸಲಾಗುತ್ತದೆ. ಮಾಸಿಕ ಲೆಕ್ಕಗಳು(ತಾಳೆ ಪಟ್ಟಿ) ಹಾಗೂ ವಾರ್ಷಿಕ ಲೆಕ್ಕಗಳನ್ನು (ಮಾರ್ಚ್ ಅಂತಿಮ ಲೆಕ್ಕಗಳು) ಸಿದ್ಧಪಡಿಸಲಾಗುತ್ತದೆ. ಅಗತ್ಯ ಲೆಕ್ಕೀಕರಣವನ್ನು ಜರ್ನಲ್ ವೋಚರ್ ಪುಸ್ತಕ, ಜರ್ನಲ್ ವೋಚರ್ ವಿಶ್ಲೇಷಣೆ ಪುಸ್ತಕ, ನಗದು ವಿಶೆಣ್ಷಣಾ ಪುಸ್ತಕ, ಜನರಲ್ ಲೆಡ್ಜರ್, ತಪಶೀಲು ಪುಸ್ತಕ, ಇತರ ರಿಜಿಸ್ಟರುಗಳ ಮೂಲಕ ನಿರ್ವಹಿಸಲಾಗುತ್ತದೆ. ಆರ್ಥಿಕ ವರ್ಷ 2011-12ಕ್ಕೆ ಲೆಕ್ಕೀಕರಿಸಿರುವ ವಿದ್ಯುತ್ ಖರೀದಿ ವೆಚ್ಚದ ಮೊಬಲಗು ರೂ.9014 ಕೋಟಿ ಹಾಗೂ ಪಾವತಿಸಿರುವ ಮೊಬಲಗು ರೂ.7291.36 ಕೋಟಿ.
ವಾರ್ಷಿಕ ಲೆಕ್ಕಗಳನ್ನು ಸಲ್ಲಿಸಿದ ನಂತರ, ಶಾಸನಬದ್ಧ ಲೆಕ್ಕ ಪರಿಶೋಧಕರು(ಎರಡು ವಾರ) ಹಾಗೂ ಮಹಾಲೇಖಪಾಲ ಕಚೇರಿಯು(1 ವಾರ) ಈ ಲೆಕ್ಕಗಳನ್ನು ಪರಿಶೋಧಿಸುತ್ತವೆ. ಶಾಸನಬದ್ಧ ಲೆಕ್ಕ ಪರಿಶೋಧಕರು ಹಾಗೂ ಮಹಾಲೇಖಪಾಲರ ಪರಿಶೋಧಿತ ಅಭಿಪ್ರಾಯಗಳಿಗೆ ಅನುಸರಣ ವರದಿಯನ್ನು ಸಲ್ಲಿಸಬೇಕಾಗುತ್ತದೆ.

ಮೇಲಿನ ಕ್ರಮಗಳಲ್ಲದೆ, ವಿದ್ಯುತ್ ಉತ್ಪಾದಕರು, ಪಿ.ಸಿ.ಕೆ.ಐ.ಎಲ್, ಕವಿಪ್ರನಿನಿ, ಕರ್ನಾಟಕ ಸರ್ಕಾರ, ಕವಿನಿಆಯೋಗ, ಎಸ್.ಎಲ್.ಡಿ.ಸಿ. ಇವುಗಳೊಂದಿಗೆ ವ್ಯವಹರಣೆಗಳನ್ನು ನಡೆಸಬೇಕಾಗುತ್ತದೆ. ಅಂಕಿ-ಅಂಶ ಮಾಹಿತಿಯನ್ನು ಒದಗಿಸಬೇಕಾಗುತ್ತದೆ. ಕವಿನಿಆಯೋಗ/ಮಾನ್ಯ ಉಚ್ಛ ನ್ಯಾಯಾಲಯದ ಮುಂದೆ ವಿದ್ಯುತ್ ಉತ್ಪಾದಕರು ಅಥವಾ ಬೆವಿಕಂಪೆನಿ ಸಲ್ಲಿಸುವ ಮನವಿಗಳಿಗೆ, ನ್ಯಾಯವಾದಿಗಳಿಗೆ ಮೊಕದ್ದಮೆಗಳನ್ನು ನಡೆಸಲು ಕಂಡಿಕೆವಾರು ಅಭಿಪ್ರಾಯಗಳನ್ನು ಸಲ್ಲಿಸಬೇಕಾಘುತ್ತದೆ. ಕವಿನಿ ಆಯೋಗವು ನಡೆಸುವ ಸಾಪ್ತಾಹಿಕ ಆಲಿಕೆ ಸಭೆಗೆ ಹಾಜರಾಗಬೇಕಾಗುತ್ತದೆ. ಆಲಿಕೆಯ ಸಮಯದಲ್ಲಿ ಕೇಳುವ ಮಾಹಿತಿಗಳನ್ನು ಒದಗಿಸಬೇಕಾಗುತ್ತದೆ.

ಮಾದರಿ ಬಿಲ್/ವಿದ್ಯುತ್ ಖರಿದಿ ವಿವರಣೆ.